ಉಡುಪಿ:- ಮೂವರು ವಿದ್ಯಾರ್ಥಿಗಳ ವಿರುದ್ಧ ಎಫ್‍ಐಆರ್, ರಾಷ್ಟ್ರೀಯ ಮಹಿಳಾ ಆಯೋಗದಿಂದಲೂ ತನಿಖೆ
ಖಾಸಗಿ ಕಾಲೇಜೊಂದರಲ್ಲಿ ಮೂವರು ವಿದ್ಯಾರ್ಥಿನಿಯರು, ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಇರಿಸಿ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋಗಳನ್ನು ಚಿತ್ರೀಕರಿಸಿರುವ ಘಟನೆ ಸಂಬಂಧ, ಕಾಲೇಜು ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿನಿಯರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.
ಮೂವರು ವಿದ್ಯಾರ್ಥಿಗಳ ವಿರುದ್ಧ ಎಫ್‍ಐಆರ್: ವೀಡಿಯೋ ಮಾಡಿದ ಮುಸ್ಲಿಂ ಸಮುದಾಯದ ಮೂವರು ವಿದ್ಯಾರ್ಥಿಗಳಾದ ಅಲಿಮತುಲ್ ಶೈಫಾ, ಶಬಾನಾಜ್ ಮತ್ತು ಆಲಿಯಾ ವಿರುದ್ಧ ಹಾಗೂ ನೇತ್ರಜ್ಯೋತಿ ಆಡಳಿತ ಮಂಡಳಿಯ ವಿರುದ್ಧ ಸಾಕ್ಷ್ಯನಾಶ ಆರೋಪದಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಸೆಕ್ಷನ್ 509, 204, 175,34, ಸೇರಿ ವಿವಿಧ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ.
ಈ ಮೂಲಕ ರಾಜ್ಯಾದ್ಯಂತ ಬಿಜೆಪಿ ನಾಯಕರು, ಹಲವು ಹಿಂದೂ ಸಂಘಟನೆಗಳು, ಮಹಿಳೆಯರಿಂದ ಭಾರಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ವಿಚಾರಣೆಯನ್ನು ಆರಂಭಿಸಲಿದ್ದಾರೆ. ಪೊಲೀಸರ ವರ್ತನೆ ವಿರುದ್ದ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾದ ನಂತರ ಎಚ್ಚೆತ್ತುಕೊಂಡ ಪೊಲೀಸರು , ಉಡುಪಿ ಜಿಲ್ಲೆಯ ಮಲ್ಪೆ ಠಾಣೆಯಲ್ಲಿ ಅಮಾನತುಗೊಂಡ ಮೂವರು ವಿದ್ಯಾರ್ಥಿನಿಯರು ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ದ ಎಫ್‍ಐಆರ್ ದಾಖಲಿಸಿದ್ದಾರೆ.
ಆರೋಪಿಗಳ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡುವುದಾಗಿ ಸಂತ್ರಸ್ಥೆಯ ಪೋಷಕರು ಹೇಳಿದ್ದರು. ಈ ಬೆಳವಣಿಗೆಗಳ ನಡುವೆಯೇ ಪ್ರತಿಪಕ್ಷ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ದೂರು ದಾಖಲಿಸದ ಪೊಲೀಸರ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮಲ್ಪೆ ಪೊಲೀಸರು ಅಮಾನತುಗೊಂಡಿದ್ದ ಮೂವರು ವಿದ್ಯಾರ್ಥಿನಿಯರು ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ ಖಾಸಗಿ ನೇತ್ರ ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಅನ್ನು ಅಡಗಿಸಿಟ್ಟು ಮೂವರು ವಿದ್ಯಾರ್ಥಿನಿಯರು ಇತರ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋಗಳನ್ನು ಶೂಟ್ ಮಾಡಿದ್ದರು. ಈ ಕೃತ್ಯ ಅರಿವಿಗೆ ಬರುತ್ತಲೇ ಹಿಂದೂ ವಿದ್ಯಾರ್ಥಿನಿಯರು ತರಾಟೆಗೆ ತೆಗೆದುಕೊಂಡಿದ್ದರು.
ವೀಡಿಯೋ ಸೆರೆ ಮಾಡಿದ ಮೂವರು ವಿದ್ಯಾರ್ಥಿನಿಯರ ಜೊತೆ ಕಾಲೇಜಿನಲ್ಲಿ ವಾಗ್ವಾದ ಮಾಡಿದ್ದರು. ಬಳಿಕ ಮಧ್ಯ ಪ್ರವೇಶಿಸಿದ ಕಾಲೇಜು ಆಡಳಿತ ಮಂಡಳಿ ಮೂವರು ವಿದ್ಯಾರ್ಥಿನಿಯರ ಮೇಲೆ ಕ್ರಮ ತೆಗೆದುಕೊಂಡು ಕಾಲೇಜಿನಿಂದ ಅಮಾನತು ಮಾಡಿತ್ತು. ಮಹಿಳೆಯರ ಶೌಚಾಲಯದಲ್ಲಿ ವೀಡಿಯೋ ಶೂಟ್ ಮಾಡಿದ ವಿಚಾರ ಬೆಳಕಿಗೆ ಬರುತ್ತಲೇ ಹಿಂದೂ ಸಂಘಟನೆಗಳು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದವು.
ಕಾಲೇಜು ಆಡಳಿತ ಮಂಡಳಿ ಆ ಮೂವರು ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿ ಪೊಲೀಸರಿಗೆ ದೂರು ನೀಡದೇ ಇತ್ಯರ್ಥಗೊಳಿಸಲು ಮುಂದಾಗಿತ್ತು. ಆದರೆ ಈ ಬಗ್ಗೆ ಧ್ವನಿ ಎತ್ತಲು ಮುಂದಾಗಿದ್ದ ಯುವತಿಯೊಬ್ಬರಿಗೆ ಪೊಲೀಸರು ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿತ್ತು.
ಶೌಚಾಲಯದಲ್ಲಿ ವಿದ್ಯಾರ್ಥಿನಿಯರು ಹಿಂದೂ ಯುವತಿಯರ ವೀಡಿಯೋ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಲಂಡನ್‍ನ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ನಾಯಕಿ ರಶ್ಮಿ ಸಾಮಂತ್ ಟ್ವೀಟ್ ಮಾಡಿದ್ದರು. ನಾನು ಉಡುಪಿ ಮೂಲದವಳಾಗಿದ್ದು ಉಡುಪಿಯಲ್ಲಿ ನಡೆದ ಈ ಘಟನೆಯ ಬಗ್ಗೆ ಯಾರು ಮಾತನಾಡುತ್ತಿಲ್ಲ ಯಾಕೆ? ಎಂದು ಬೇಸರ ಹೊರಹಾಕಿದ್ದರು.
ಮೂವರು ವಿದ್ಯಾರ್ಥಿನಿಯರು ಕಾಲೇಜಿನ ಶೌಚಾಲಯದಲ್ಲಿ ಹಿಂದೂ ಹುಡುಗಿಯರ ವೀಡಿಯೋ ಮಾಡಲು ಕ್ಯಾಮೆರಾ ಇರಿಸಿದ್ದಾರೆ. ಬಳಿಕ ವೀಡಿಯೋಗಳನ್ನು ತಮ್ಮ ಸಮುದಾಯದಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಬಳಿಕ ವೈರಲ್ ಆಗಿದ್ದು, ಟ್ವೀಟ್‍ನ ಸತ್ಯಾಸತ್ಯತೆಯ ಬಗ್ಗೆ ತಿಳಿಯಲು ಮಲ್ಪೆ ಮಣಿಪಾಲ ಪೊಲೀಸರು ಆಕೆಯ ಮನೆಗೆ ತೆರಳಿ ತಂದೆ ತಾಯಿಯ ವಿಚಾರಣೆ ನಡೆಸಿದ್ದಾರೆ. ಇದೀಗ ಪೊಲೀಸರ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಆಕೆಗೆ ಹಾಗೂ ಆಕೆಯ ಪೊಷಕರಿಗೆ ಪೊಲೀಸರಿಂದ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ರಾಷ್ಟ್ರೀಯ ಮಹಿಳಾ ಆಯೋಗದಿಂದಲೂ ತನಿಖೆ:
ಉಡುಪಿ ಕಾಲೇಜಿನ ಶೌಚಾಲಯ ನಡೆದ ವೀಡಿಯೋ ಚಿತ್ರೀಕರಣದ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದಿಂದ ತನಿಖೆ ಮಾಡಲು ಮುಂದಾಗಿದೆ.
ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣದ ಬಗ್ಗೆ ಈಗ ಉಡುಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಆಗಮಿಸಲಿದೆ. ರಾಷ್ಟ್ರೀಯ ಮಹಿಳಾ ಆಯೋಗದ ದಕ್ಷಿಣ ಭಾರತ ಸದಸ್ಯೆ ಖುಷ್ಬು ಸುಂದರ್ ನೇತೃತ್ವದಲ್ಲಿ ತನಿಖೆ ಮಾಡಲಾಗುತ್ತದೆ. ಖುಷ್ಬು ಸುಂದರ್ ಅವರು ಉಡುಪಿಗೆ ಆಗಮಿಸಿ ವಿಚಾರಣೆ ನಡೆಸಲಿದ್ದಾರೆ. ಈ ಬಗ್ಗೆ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಮಾಹಿತಿ ನೀಡಿದ್ದಾರೆ.

Post a Comment