ಮುಂಬೈ:- ಗೋರೆಗಾಂವ್ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ: 6 ಮೃತ, 40ಕ್ಕೂ ಹೆಚ್ಚು ಮಂದಿಗೆ ಗಾಯ
ಮುಂಬೈನ ಗೋರೆಗಾಂವ್ನಲ್ಲಿರುವ ಏಳು ಅಂತಸ್ತಿನ ಕಟ್ಟಡವೊಂದರಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು ಇದುವರೆಗೂ ಆರು ಮಂದಿ ಮೃತಪಟ್ಟಿದ್ದಾರೆ. ಮುಂಜಾನೆ 3 ಗಂಟೆಗೆ ಸಂಭವಿಸಿದ ಈ ಅಗ್ನಿ ಅವಘಡದಲ್ಲಿ 40ಕ್ಕೂ ಹೆಚ್ಚು ಜನರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಆರಂಭಿಕ ವರದಿಗಳ ಪ್ರಕಾರ, ಗೋರೆಗಾಂವ್ನ ಜೈ ಭವಾನಿ ಎಂಬ ಹೆಸರಿನ ಏಳು ಅಂತಸ್ತಿನ ಕಟ್ಟಡದ ಪಾರ್ಕಿಂಗ್ ಪ್ರದೇಶದಲ್ಲಿ ಮೊದಲಿಗೆ ಈ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಇಡೀ ಕಟ್ಟಡಕ್ಕೆ ಬೆಂಕಿ ಕೆನ್ನಾಲಿಗೆ ಹರಡಿದೆ. ಈ ಘಟನೆಯಲ್ಲಿ, ಹಲವಾರು ದ್ವಿಚಕ್ರ ವಾಹನಗಳು ಮತ್ತು ಕಾರುಗಳು ಸುಟ್ಟು ಭಸ್ಮವಾಗಿವೆ ಎಂದು ವರದಿಯಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳ ಅಗ್ನಿಶಾಮಕ ಕಾರ್ಯಾಚರಣೆ ಆರಂಭಿಸಿದ್ದು ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ.
ಗಾಯಾಳುಗಳನ್ನು ಎಚ್ಬಿಟಿ ಆಸ್ಪತ್ರೆ ಮತ್ತು ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡಿರುವ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. 25 ಗಾಯಾಳುಗಳನ್ನು ಎಚ್ಬಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದರಲ್ಲಿ 12 ಪುರುಷರು ಮತ್ತು 13 ಮಹಿಳೆಯರು ಇದ್ದಾರೆ. ಇದಲ್ಲದೆ, ಅಪ್ರಾಪ್ತ ಬಾಲಕಿಗೂ ಇಲ್ಲಿಯೇ ಚಿಕಿತ್ಸೆ ಮುಂದುವರೆದಿದೆ.
ಅದೇ ಸಮಯದಲ್ಲಿ, ಮುಂಬೈನ ಕೂಪರ್ ಆಸ್ಪತ್ರೆಗೆ 15 ಜನರನ್ನು ದಾಖಲಿಸಲಾಗಿದೆ. ಅಲ್ಲಿ 6 ಪುರುಷರು ಮತ್ತು 9 ಮಹಿಳೆಯರು ಚಿಕಿತ್ಸೆ ಪಡೆಯುತ್ತಿದ್ದಾರೆ.ಸ್ಥಳೀಯರ ಪ್ರಕಾರ, ಪಾರ್ಕಿಂಗ್ ಪ್ರದೇಶದಲ್ಲಿ ಬಿದ್ದಿದ್ದ ಬಟ್ಟೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬಳಿಕ ಇದು ಇಡೀ ಕಟ್ಟಡಕ್ಕೆ ಪಸರಿಸಿದೆ ಎಂದು ತಿಳಿದುಬಂದಿದೆ.
Post a Comment