ಶಿವಮೊಗ್ಗ; ಎನ್‌ಕೌಂಟರ್‌ನಲ್ಲಿ ಯುವಕ ಬಲಿ ಸುದ್ದಿ, ಪೊಲೀಸರ ಸ್ಪಷ್ಟನೆ
ಶಿವಮೊಗ್ಗ ನಗರದ ಹೊರವಲಯದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಈ ಘಟನೆ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ವಾಟ್ಸಪ್‌ನಲ್ಲಿ ಪೊಲೀಸ್ ಎನ್ ಕೌಂಟರ್‌ಗೆ ಮುಸ್ಲಿಂ ಯುವಕ ಬಲಿ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಸುದ್ದಿಯ ಬಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಫೇಸ್‌ಬುಕ್ ಪುಟದ ಮೂಲಕ ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ. ಇದು ಸುಳ್ಳು ಸುದ್ದಿ ಎಂದು ಅವರು ಹೇಳಿದ್ದು, ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.ಫೇಸ್‌ಬುಕ್ ಪೋಸ್ಟ್‌ನಲ್ಲಿ 'ಸಾಮಾಜಿಕ ಜಾಲತಾಣದಲ್ಲಿ ಶಿವಮೊಗ್ಗದ ರಾಗಿಗುಡ್ಡದಲ್ಲಿ ಪೊಲೀಸ್ ಎನ್‌ಕೌಂಟರ್‌ನಿಂದ ಮುಸ್ಲಿಂ ಯುವಕನ ಮೃತ್ಯು ಎಂಬ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದ್ದು, ಈ ರೀತಿಯ ಯಾವುದೇ ಘಟನೆಯು ನಡೆದಿರುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.'ಸದರಿ ಸುಳ್ಳು ಸುದ್ಧಿಯನ್ನು ಹರಿಬಿಟ್ಟವರ ವಿರುದ್ಧ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0098/2023 ರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತದೆ' ಎಂದು ಪೊಲೀಸರು ಹೇಳಿದ್ದಾರೆ. ವಾಟ್ಸಪ್‌ನಲ್ಲಿ ಬಂದಿರುವ ಚಿತ್ರ, ಬರಹದ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ.
ಶಾಂತವಾಗಿದೆ ಶಿವಮೊಗ್ಗ ಭಾನುವಾರ ಸಂಜೆ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ ಶಿವಮೊಗ್ಗ ಹೊರವಲಯದ ರಾಗಿಗುಡ್ಡದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಂಗಳವಾರ ರಾಗಿಗುಡ್ಡ ಪ್ರದೇಶಕ್ಕೆ ಭೇಟಿ ನೀಡಿದರು. ಸ್ಥಳೀಯ ನಿವಾಸಿಗಳ ಜೊತೆ ಮಾತುಕತೆ ನಡೆಸಿದರು.
ಭಾನುವಾರ ನಡೆದ ಘಟನೆ ಕುರಿತು ಒಟ್ಟು 24 ಎಫ್‌ಐಆರ್‌ಗಳನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ, 60 ಜನರನ್ನು ಬಂಧಿಸಲಾಗಿದೆ. ಕೆಲವರನ್ನು ಶಿವಮೊಗ್ಗ, ಮತ್ತೆ ಕೆಲವರನ್ನು ಚಿತ್ರದುರ್ಗ ಜೈಲಿಗೆ ಕಳಿಸಲಾಗಿದೆ. ಇನ್ನೂ 6ಕ್ಕೂ ಹೆಚ್ಚು ಜನ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ.
ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಚಿವ ಮಧು ಬಂಗಾರಪ್ಪ, "ಶಾಂತಿ ಭಂಗ ಮಾಡುವ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ, ಕಾನೂನು ಮುರಿಯುವ ವ್ಯಕ್ತಿಗಳ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.
"ಶಿವಮೊಗ್ಗ ಜಿಲ್ಲೆ ಸಾಹಿತ್ಯ, ಸಂಸ್ಕೃತಿ, ಕಲೆ, ಪ್ರಕೃತಿ ಸೌಂದರ್ಯ ಮತ್ತು ಸಾಮರಸ್ಯಕ್ಕೆ ಹೆಸರಾಗಿದೆ. ಜಿಲ್ಲೆಯಲ್ಲಿ ಎಲ್ಲರೂ ಶಾಂತಿ, ಸಹಭಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಸಹ ಶಾಂತಿಯುತವಾಗಿ ನಡೆದಿದೆ. ಆದರೆ ಈದ್ ಮಿಲಾದ್ ಹಬ್ಬದಂದು ಅಹಿತಕರ ಘಟನೆ ನಡೆದಿರುವುದು ವಿಷಾದನೀಯ" ಎಂದು ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಭಾನುವಾರದ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. "ಘಟನೆಯಲ್ಲಿ ಒಂದು ಕಾರು, ಒಂದು ಆಟೋ, ಎರಡು ಬೈಕ್‌ಗಳಿಗೆ ಹಾನಿಯಾಗಿದೆ. 7 ಮನೆಗಳ ಮೇಲೆ ಕಲ್ಲು ತೂರಾಟವಾಗಿದೆ. ಅರ್ಧ ಗಂಟೆಯಲ್ಲಿಯೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ನಗರದ ಬೇರೆ ಯಾವುದೇ ಭಾಗದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
"ಸದ್ಯ ಶಿವಮೊಗ್ಗ ಶಾಂತಿಯುತವಾಗಿದೆ. ಯಾವುದೇ ಧಗ ಧಗ, ಕೊತ ಕೊತ ಇಲ್ಲ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ" ಎಂದು ಅವರು ತಿಳಿಸಿದ್ದಾರೆ.
ಕಲ್ಲು ತೂರಾಟ ನಡೆದ ರಾಗಿಗುಡ್ಡ ಪ್ರದೇಶದಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದೆ. ಪ್ರದೇಶಕ್ಕೆ ತೆರಳುವ, ಹೊರ ಬರುವ ಮಾರ್ಗದಲ್ಲಿ ಪೊಲೀಸರ ಭದ್ರತೆ ಇದೆ. ಜನರು ಗುಂಪು ಸೇರದಂತೆ, ಹೊಸಬರು ಪ್ರದೇಶಕ್ಕೆ ಬರದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

Post a Comment