ಮಗನ ಕದಿಯುವ ಚಟ , ಎರಡು ತಿಂಗಳಿನಿಂದ ಕಟ್ಟಿ ಹಾಕಿದ ಪೋಷಕರು
ನಿರಂತರವಾಗಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಮಗನನ್ನು ಪೊಷಕರೇ ಎರಡು ತಿಂಗಳಿನಿಂದ ಕಟ್ಟಿಹಾಕುತ್ತಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ. ಕದಿಯುವ ಚಟದಿಂದ ಬೇಸತ್ತ ಪೋಷಕರು ದಿನಾಲೂ ಕೆಲಸಕ್ಕೆ ತೆರಳುವ ವೇಳೆ ಬಾಲಕನ ಕೈಗಳನ್ನು ಕಟ್ಟಿ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಂಡ ನೀಡಿದ ಸುಳಿವಿನ ಮೇರೆಗೆ ಬಾಲಕನನ್ನು ಶುಕ್ರವಾರ ರಕ್ಷಿಸಲಾಗಿದೆ. ಶಾಲೆಬಿಟ್ಟು ಮನೆಯಲ್ಲಿದ್ದ ಬಾಲಕನನ್ನು ಸರ್ಕಾರಿ ಬಾಲಗೃಹಕ್ಕೆ ಕಳುಹಿಸಲಾಗಿದೆ.
ಆತನನ್ನು ಮನೆಗೆ ಹೋಗಿ ನೋಡಿದಾಗ ಬಕೆಟ್ ಮೇಲೆ ನಿಲ್ಲಿಸಲಾಗಿದ್ದು, ಪೋಷಕರು ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೋಗುವ ವೇಳೆ ಬಾಲಕನನ್ನು ಕಟ್ಟಿಹಾಕಿ ಹೋಗುತ್ತಿದ್ದರು. ಕಟ್ಟಿಹಾಕಿದ್ದರಿಂದ ಉಂಟಾಗಿರುವ ಗಾಯಗಳು ಕನಿಷ್ಠ ಎರಡರಿಂದ ಮೂರು ತಿಂಗಳಷ್ಟು ಹಳೆಯವು ಎನ್ನಲಾಗಿದೆ.
ಆತನ ನಡವಳಿಕೆಗೆ ಸಂಬಂಧಿಸಿದ ಸಮಸ್ಯೆಯ ಬಗ್ಗೆ ಅಜ್ನಿ ಪೊಲೀಸರು ಮಾಹಿತಿ ನೀಡಿದ್ದರು. ಮಗನ ಕದಿಯುವ ಚಟದ ಬಗ್ಗೆ ಜಿಗುಪ್ಸೆಗೊಂಡ ಪೋಷಕರು ಮಗನನ್ನು ಪ್ರತಿ ದಿನ ಹಲವು ಗಂಟೆಗಳ ಕಾಲ ಕಟ್ಟಿಹಾಕುತ್ತಿದ್ದರು ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಆತನನ್ನು ಶಾಲೆಯಿಂದ ಬಿಡಿಸಿದ್ದರು.ಬಾಲಕನ ಕಾಲು ಮತ್ತು ಕೈಗಳಲ್ಲಿ ಇರುವಂತಹ ಗಾಯಗಳು ಮತ್ತು ಮಾನಸಿಕದ ಜತೆಗೆ ದೈಹಿಕ ಆಘಾತ, ಸರಪಳಿ ಮತ್ತು ಹಗ್ಗದಿಂದ ಬಿಗಿದಿದ್ದರಿಂದ ಆಗಿದೆ ಎಂದು ವೈದ್ಯಕೀಯ ಪರೀಕ್ಷೆ ದೃಢಪಡಿಸಿದೆ. ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಪ್ರಕರಣವನ್ನು ಪ್ರಸ್ತುತಪಡಿಸಲಾಗಿದೆ. ಪೊಲೀಸರು ಬಾಲನ್ಯಾಯ ಕಾಯ್ದೆಯಡಿ ತನಿಖೆ ನಡೆಸುತ್ತಿದ್ದಾರೆ.

Post a Comment